|
೧. ಅರಬ್ಬನ ಅಶ್ಲೀಲ ಬಯ್ಗುಳವೂ ದೇವರ ಸಂದೇಶವೂ |
|
ಒಂದು ದಿನ ಪ್ರವಾದಿ ಮೊಹಮ್ಮದ್‌ರು ಮಸೀದಿಯೊಂದರಲ್ಲಿ ಬೆಳಗಿನ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಅವರೊಂದಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದವರ ಪೈಕಿ ಇಸ್ಲಾಂನಲ್ಲಿ ಮೇಲೇರಬಯಸುತ್ತಿದ್ದ ಅರಬ್ಬನೊಬ್ಬನಿದ್ದ. ಆ ದಿನ ಕೊರಾನ್‌ನಲ್ಲಿ “ನಾನೇ ನಿಮ್ಮ ನಿಜವಾದ ದೇವರು” ಎಂಬ ಅರ್ಥವಿರುವ ಫೆರೋನ ಹೇಳಿಕೆ ಉಳ್ಳ ಶ್ಲೋಕವನ್ನು ಮಹಮ್ಮದ್‌ರು ಪಠಿಸುತ್ತಿದ್ದಾಗ ಅದನ್ನು ಕೇಳಿದ ಅರಬ್ಬನು ಕೋಪೋದ್ರಿಕ್ತನಾಗಿ ಪ್ರಾರ್ಥನೆಯನ್ನು ನಿಲ್ಲಿಸಿ ಬೊಬ್ಬೆ ಹೊಡೆದ: “ಸೂಳೆಮಗ*, ಬಡಾಯಿಕೋರ!” ಪ್ರವಾದಿಗಳು ತಮ್ಮ ಪ್ರಾರ್ಥನೆ ಮುಗಿಸಿದ ಕೂಡಲೆ ಅವರ ಸಹಚರರು ಅರಬ್ಬನಿಗೆ ಛೀಮಾರಿ ಹಾಕಲಾರಂಭಿಸಿದರು: “ನಿನ್ನ ಪ್ರಾರ್ಥನೆ ನಿಷ್ಪ್ರಯೋಜಕವಾದದ್ದು. ನೀನು ಬೇಡದ ಪದಗಳನ್ನು ಹೇಳಿ ಪ್ರಾರ್ಥನೆಯನ್ನು ಮಧ್ಯೆ ನಿಲ್ಲಿಸಿದೆ. ಅಷ್ಟೇ ಅಲ್ಲದೆ ದೇವರ ಪ್ರವಾದಿಯ ಎದುರಿನಲ್ಲಿ ಅಶ್ಲೀಲ ಭಾಷೆಯನ್ನು ಉಪಯೋಗಿಸಿದೆ.” ಅರಬ್ಬನು ಹೆದರಿಕೆಯಿಂದಲೂ ಸಂಕೋಚದಿಂದಲೂ ನಡುಗುತ್ತಾ ನಿಂತಿದ್ದ. ಆಗ ಗೇಬ್ರಿಯಲ್ ಪ್ರತ್ಯಕ್ಷನಾಗಿ ಪ್ರವಾದಿಗೆ ಹೇಳಿದ, “ದೇವರು ನಿನಗೆ ತನ್ನ ಸಲಾಮ್ ಕಳುಹಿಸಿದ್ದಾನೆ. ಈ ಜನ ಮುಗ್ಧ ಅರಬ್ಬನನ್ನು ದಂಡಿಸುವುದನ್ನು ನಿಲ್ಲಿಸಬೇಕೆಂಬುದು ಅವನ ಇಚ್ಛೆ. ಅವನ ಪ್ರಾಮಾಣಿಕ ಶಪಿಸುವಿಕೆ ಅನೇಕರು ಜಪಮಾಲೆ ಉಪಯೋಗಿಸಿ ಮಾಡುವ ಧಾರ್ಮಿಕಶ್ರದ್ಧೆಯ ಪ್ರಾರ್ಥನೆಗಿಂತ ಹೆಚ್ಚಿನ ಪ್ರಭಾವವನ್ನು ನನ್ನ ಮೇಲೆ ಬೀರಿದೆ!” |
|
(* ಇಂಗ್ಲಿಷ್ ಪಾಠದಲ್ಲಿ ‘ಸನ್ ಆಫ್ ಎ ಬಿಚ್’ ಎಂಬುದಾಗಿ ಇದೆ) |
|
***** |
|
೨. ಬೀಗ ತಯಾರಕನ ಕತೆ |
|
ತಾನು ಮಾಡದ ಅಪರಾಧಗಳನ್ನು ಮಾಡಿರುವುದಾಗಿ ಯಾರೋ ಮಾಡಿದ ಸುಳ್ಳು ಆಪಾದನೆಯಿಂದಾಗಿ ಕತ್ತಲಿನ ಕೂಪವಾಗಿದ್ದ ಸೆರೆಮನೆಯಲ್ಲಿ ಸೆರೆವಾಸ ಅನಭವಿಸುತ್ತಿದ್ದ ಬೀಗತಯಾರಕನೊಬ್ಬ ಒಂದಾನೊಂದು ಕಾಲದಲ್ಲಿ ಇದ್ದ. ಅವನನ್ನು ಬಹುವಾಗಿ ಪ್ರೀತಿಸುತ್ತಿದ್ದ ಆತನ ಹೆಂಡತಿ ಸ್ವಲ್ಪ ಕಾಲ ಅವನು ಸೆರೆವಾಸ ಅನುಭವಿಸಿದ ನಂತರ ರಾಜನ ಹತ್ತರ ಹೋಗಿ ಅವನು ದಿನಕ್ಕೆ ಈದು ಬಾರಿ ಮಾಡಬೇಕಾ ಪ್ರಾರ್ಥನೆಗಳನ್ನು ಸರಿಯಾಗಿ ಮಾಡಲು ಅನುಕೂಲವಾಗುವಂತೆ ಪ್ರಾರ್ಥನಾ ನೆಲಹಾಸೊಂದನ್ನು ಅವನಿಗೆ ಕೊಡಲು ಅನುಮತಿ ನೀಡಬೇಕಾಗಿ ಮೊರೆಯಿಟ್ಟಳು. ಈ ವಿನಂತಿ ನ್ಯಾಯಸಮ್ಮತವಾಗಿದೆ ಎಂಬುದಾಗಿ ತೀರ್ಮಾನಿಸಿದ ರಾಜ ಪ್ರಾರ್ಥನಾ ನೆಲಹಾಸನ್ನು ಅವನಿಗೆ ಕೊಡಲು ಅನುಮತಿ ನೀಡಿದ. ಕೃತಜ್ಞತಾಪೂರ್ವಕವಾಗಿ ಆ ನೆಲಹಾಸನ್ನು ಹೆಂಡತಿಯಿಂದ ಸ್ವೀಕರಿಸಿದ ಬೀಗತಯಾರಕ ಬಲು ಶ್ರದ್ಧೆಯಿಂದ ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದ. ಇಂತು ಬಹುಕಾಲ ಸೆರೆವಾಸ ಅನುಭವಿಸಿದ ಬೀಗತಯಾರಕ ಒಂದು ದಿನ ಜೈಲಿನಿಂದ ತಪ್ಪಿಸಿಕೊಂಡ. ತಪ್ಪಿಸಿಕೊಂಡದ್ದು ಹೇಗೆ ಎಂಬುದಾಗಿ ಜನ ಕೇಳಿದಾಗ ಅವನು ಹೇಳಿದ, ‘ಅನೇಕ ವರ್ಷಗಳ ಕಾಲ ಜೈಲಿನಿಂದ ಮುಕ್ತಿ ದೊರೆಯಲಿ ಎಂಬುದಾಗಿ ಪ್ರಾರ್ಥಿಸಿದ ನಂತರ ಅದಕ್ಕಾಗಿ ಮಾಡಬೇಕಾದ್ದೇನು ಎಂಬುದು ಸ್ಪಷ್ಟವಾಗಿ ಕಣ್ಣೆದುರೇ ಗೋಚರಿಸಿತು. ಪ್ರಾರ್ಥನ ನೆಲಹಾಸುವಿನಲ್ಲಿ ನನ್ನ ಹೆಂಡತಿ ನನ್ನ ಬಂಧಿಸಿದ್ದ ಬೀಗದ ವಿನ್ಯಾಸವನ್ನು ಹೆಣೆದಿದ್ದದ್ದು ಒಂದು ದಿನ ಇದ್ದದ್ದಕ್ಕಿದ್ದಂತೆ ಗೋಚರಿಸಿತು. ಈ ಅರಿವು ಮೂಡಿದಾಕ್ಷಣ ಸೆರೆಮನೆಯಿಂದ ಹೊರಬರಲು ಅಗತ್ಯವಾದ ಎಲ್ಲ ಮಾಹಿತಿ ಈಗಾಗಲೇ ತನ್ನ ಹತ್ತಿರವಿದೆ ಎಂಬುದು ಅರ್ಥವಾಯಿತು. ತದನಂತರ ನಾನು ನನ್ನ ಕಾವಲಿನವರ ಮಿತ್ರತ್ವ ಗಳಿಸಲು ಆರಂಭಿಸಿದೆ. ಸೆರೆಮನೆಯಿಂದ ತಪ್ಪಿಸಿಕೊಳ್ಳಲು ತನಗೆ ಸಹಕರಿಸುವಂತೆ ಅವರ ಮನವೊಲಿಸಿದ್ದಲ್ಲದೆ ತನ್ನೊಂದಿಗೆ ಅವರೂ ಹೊರಬಂದು ಈಗ ನಡೆಸುತ್ತಿರುವುದಕ್ಕಿಂತ ಉತ್ತಮ ಜೀವನ ನಡೆಸಬಹುದು ಎಂಬುದನ್ನೂ ಮನವರಿಕೆ ಮಾಡಿದೆ. ಪಹರೆಯವರಾಗಿದ್ದರೂ ತಾವೂ ಸೆರೆಮನೆಯಲ್ಲಿಯೇ ಜೀವನ ಸವೆಸಬೇಕು ಎಂಬ ಅರಿವು ಅವರಿಗಾದದ್ದರಿಂದ ಅವರು ನನ್ನೊಂದಿಗೆ ಸಹಕರಿಸಲು ಒಪ್ಪಿದರು. ಅವರಿಗೂ ಸೆರೆಮನೆಯಿಂದ ತಪ್ಪಿಸಿಕೊಂಡು ಹೋಗುವ ಇಚ್ಛೆ ಇದ್ದರೂ ಹೇಗೆ ಎಂಬುದು ತಿಳಿದಿರಲಿಲ್ಲ. ಬೀಗ ತಯಾರಕ ಹಾಗೂ ಅವನ ಪಹರೆಯವರು ತಯಾರಿಸಿದ ಕಾರ್ಯಯೋಜನೆ ಇಂತಿತ್ತು: ಪಹರೆಯವರು ಲೋಹದ ತುಂಡುಗಳನ್ನು ತರಬೇಕು. ಅವನ್ನು ಉಪಯೋಗಿಸಿ ಮಾರುಕಟ್ಟೆಯಲ್ಲಿ ಮಾರಬಹುದಾದ ವಸ್ತುಗಳನ್ನು ಬೀಗ ತಯಾರಕ ತಯಾರಿಸಬೇಕು. ಇಂತು ಅವರೀರ್ವರೂ ಜೊತೆಗೂಡಿ ತಪ್ಪಿಸಿಕೊಂಡು ಹೋಗಲು ಅಗತ್ಯವಾದ ಸಂಪನ್ಮೂಲಗಳನ್ನು ಸಂಗ್ರಹಿಸಬೇಕು. ಅವರು ಸಂಪಾದಿಸಬಹುದಾದ ಅತ್ಯಂತ ಬಲಯುತವಾದ ಲೋಹದ ತುಂಡಿನಿಂದ ಸೆರೆಮನೆಯ ಬೀಗ ತೆರಯಬಹುದಾದ ಬೀಗದಕೈ ಒಂದನ್ನು ಬೀಗ ತಯಾರಕ ತಯಾರಿಸಬೇಕು. |
|
ಎಲ್ಲವೂ ಯೋಜನೆಯಂತೆ ಜರಗಿ ಬೀಗದಕೈ ಸಿದ್ಧವಾದ ನಂತರ ಒಂದು ರಾತ್ರಿ ಪಹರೆಯವರು ಮತ್ತು ಬೀಗ ತಯಾರಕ ಸೆರೆಮನೆಯ ಬೀಗ ತೆರೆದು ಹೊರನಡೆದರು. ಬೀಗ ತಯಾರಕನ ಹೆಂಡತಿ ಅವನಿಗಾಗಿ ಕಾಯುತ್ತಿದ್ದಳು. ಅವನು ಪ್ರಾರ್ಥನೆಯ ನೆಲಹಾಸನ್ನು ಸೆರೆಮನೆಯಲ್ಲಿಯೇ ಬಿಟ್ಟಿದ್ದನು, ಅದನ್ನು ಅರ್ಥೈಸಬಲ್ಲ ಜಾಣ ಕೈದಿಯೊಬ್ಬನಿಗೆ ಅದು ಮುಂದೆಂದಾದರೂ ನೆರವಾದೀತು ಎಂಬ ನಂಬಿಕೆಯಿಂದ. ಈ ರೀತಿ ಬೀಗ ತಯಾರಕ ಅವನ ಪ್ರೀತಿಯ ಹೆಂಡತಿಯೊಂದಿಗೆ ಸಂತೋಷದಿಂದ ಪುನಃ ಸೇರಿಕೊಂಡನು. ಮಾಜಿ ಪಹರೆಯವರು ಅವನ ಮಿತ್ರರಾದರು. ಎಲ್ಲರೂ ಸಾಮರಸ್ಯದಿಂದ ಬಾಳಿದರು. |
|
***** |
|
೩. ಮರಳು ಹೇಳಿದ ಕತೆ |
|
ದೂರದ ಪರ್ವತಶ್ರೇಣಿಯೊಂದರಲ್ಲಿ ಹುಟ್ಟಿದ ತೊರೆಯೊಂದು ಎಲ್ಲ ರೀತಿಯ ಗ್ರಾಮಾಂತರ ಪ್ರದೇಶಗಳ ಮೂಲಕ ಹರಿದು ಅಂತಿಮವಾಗಿ ಮರುಭೂಮಿಯೊಂದರ ಮರಳಿನ ರಾಶಿಯನ್ನು ತಲುಪಿತು. ಇತರ ಎಲ್ಲ ಅಡೆತಡೆಗಳನ್ನು ದಾಟಿದ ರೀತಿಯಲ್ಲಿಯೇ ಇದನ್ನೂ ದಾಟಲು ತೊರೆ ಪ್ರಯತ್ನಿಸಿತಾದರೂ ಸಾಧ್ಯವಾಗಲಿಲ್ಲ. ಅದು ಎಷ್ಟು ವೇಗವಾಗಿ ಮರಳನ್ನು ದಾಟಲು ಪ್ರಯತ್ನಿಸುತ್ತಿತ್ತೋ ಅಷ್ಟೇ ವೇಗವಾಗಿ ಅದರ ನೀರು ಮಾಯವಾಗುತ್ತಿತ್ತು. ಮರುಭೂಮಿಯನ್ನು ಅದು ದಾಟಬೇಕೆಂಬುದು ದೈವೇಚ್ಛೆ ಎಂಬುದಾಗಿ ಅದು ನಂಬಿದ್ದರೂ ಹೇಗೆ ಎಂಬುದು ಅದಕ್ಕೆ ತಿಳಿಯಲೇ ಇಲ್ಲ. ಆಗ ಮರುಭೂಮಿಯೊಳಗಿನಿಂದಲೇ ಹೊಮ್ಮಿದ ಗುಪ್ತಧ್ವನಿಯೊಂದು ಪಿಸುಗುಟ್ಟಿತು, “ಗಾಳಿ ಮರುಭೂಮಿಯನ್ನು ದಾಟುತ್ತದೆ, ಅಂತೆಯೇ ತೊರೆಯೂ ಕೂಡ.” |
|
ಈ ಹೇಳಿಕೆಗೆ ತೊರೆ ಇಂತು ಆಕ್ಷೇಪಿಸಿತು: “ನಾನು ಎಷ್ಟೇ ವೇಗವಾಗಿ ಮರಳಿಗೆ ಢಿಕ್ಕಿ ಹೊಡೆದರೂ ಮರಳು ನೀರನ್ನೆಲ್ಲ ಹೀರುತ್ತದೆ, ಗಾಳಿಯಾದರೋ ಮರಳಿನ ಮೇಲಿನಿಂದ ಹಾರಬಲ್ಲದ್ದಾದ್ದರಿಂದ ಮರುಭೂಮಿಯನ್ನು ದಾಟುತ್ತದೆ.” |
|
“ನಿನಗೆ ರೂಢಿಯಾಗಿರುವಂತೆ ಮರಳಿಗೆ ಢಿಕ್ಕಿ ಹೊಡೆದರೆ ನೀನು ಮರುಭೂಮಿಯನ್ನು ದಾಟಲಾರೆ. ನೀನು ಮಾಯವಾಗುವೆ ಅಥವ ಜೌಗು ಭೂಮಿಯ ಕೆಸರು ಆಗುವೆ. ಗಮ್ಯ ಸ್ಥಾನಕ್ಕೆ ಗಾಳಿ ನಿನ್ನನ್ನು ಒಯ್ಯಲು ಬಿಡು.” |
|
“ಅಂತಾಗುವುದು ಹೇಗೆ?” |
|
“ನಿನ್ನನ್ನು ಹೀರಲು ಗಾಳಿಗೆ ಅವಕಾಶ ನೀಡು.” |
|
ಈ ಸಲಹೆ ನದಿಗೆ ಒಪ್ಪಿಗೆ ಆಗಲಿಲ್ಲ. ಈ ಹಿಂದೆ ಅದನ್ನು ಯಾರೂ ಹೀರಿರಲಿಲ್ಲ. ತನ್ನ ವೈಯಕ್ತಿಕತೆ ಕಳೆದುಕೊಳ್ಳಲು ಅದಕ್ಕೆ ಇಷ್ಟವೂ ಇರಲಿಲ್ಲ. ಒಮ್ಮೆ ಅದು ಕಳೆದು ಹೋದರೆ ಅದನ್ನು ಪುನಃ ಮರಳಿ ಪಡೆಯಲು ಸಾಧ್ಯವೇ ಎಂಬುದು ಯಾರಿಗೆ ಗೊತ್ತಿದೆ? |
|
ಮರಳು ಹೇಳಿತು, “ಗಾಳಿ ಈ ಕಾರ್ಯವನ್ನು ಬಲು ಹಿಂದಿನಿಂದಲೂ ಮಾಡುತ್ತಿದೆ. ಅದು ನೀರನ್ನು ಹೀರಿ ಮರುಭೂಮಿಯ ಮೇಲಿನಿಂದ ಅದನ್ನು ಒಯ್ದು ಪುನಃ ಕೆಳಕ್ಕೆ ಬೀಳಲು ಬಿಡುತ್ತದೆ. ಮಳೆಯ ರೂಪದಲ್ಲಿ ನೆಲಕ್ಕೆ ಬಿದ್ದ ನೀರು ಪುನಃ ತೊರೆಯಾಗುತ್ತದೆ.” |
|
“ನೀನು ಹೇಳುತ್ತಿರುವುದು ನಿಜವೋ ಅಲ್ಲವೋ ಎಂಬುದು ನನಗೆ ತಿಳಿಯುವುದಾದರೂ ಹೇಗೆ?” |
|
“ನಾನು ಹೇಳುತ್ತಿರುವುದು ನಿಜ. ನೀನು ಅದನ್ನು ನಂಬದೇ ಇದ್ದರೆ ಜೌಗು ಭೂಮಿಯಲ್ಲಿನ ಕೆಸರಿಗಿಂತ ಭಿನ್ನವಾದದ್ದೇನೂ ಆಗುವುದಿಲ್ಲ. ಅಂತಾಗಲೂ ಬಹಳ, ಬಹಳ ವರ್ಷಗಳು ಬೇಕಾಗುತ್ತವೆ. ಆ ಸ್ಥಿತಿ ನದಿಯದ್ದರಂತಂತೂ ಇರುವುದಿಲ್ಲ.” |
|
“ಇಂದು ನಾನು ಯಾವ ತೊರೆ ಆಗಿದ್ದೇನೆಯೋ ಆ ತೊರೆಯಂತೂ ಆಗಿರುವುದಿಲ್ಲ.” |
|
“ ಇಲ್ಲಿಯೇ ಇದ್ದರೂ ಗಾಳಿಯೊಂದಿಗೆ ಹೋದರೂ ನೀನು ಈಗಿನ ತೊರೆಯ ಸ್ಥಿತಿಯಲ್ಲಂತೂ ಇರುವುದಿಲ್ಲ. ನಿನ್ನ ಇಂದಿನ ತೋರಿಕೆಯ ಹಿಂದೆ ಅಡಗಿರುವ ಮೂಲಭೂತ ಸಾರವನ್ನು ಗಾಳಿ ಒಯ್ಯುತ್ತದೆ. ಅದು ಪುನಃ ತೊರೆಯ ರೂಪ ಧರಿಸುತ್ತದೆ. ನಿನ್ನನ್ನು ನೀನು ತೊರೆ ಅಂದುಕೊಳ್ಳುತ್ತಿರುವುದು ಏಕೆಂದರೆ ನಿನ್ನ ಮೂಲಭೂತ ಸಾರ ಏನೆಂಬುದು ನಿನಗೇ ತಿಳಿದಿಲ್ಲ.” |
|
***** |
|
೪. ಅಪಾತ್ರ |
|
ಈ ಲೋಕದಲ್ಲಿ ನಾನು ಬಾಲ್ಯದಿಂದಲೂ ಒಬ್ಬ ಅಪಾತ್ರನಾಗಿದ್ದೇನೆ. ನನ್ನನ್ನು ಯಾರೂ, ನನ್ನ ತಂದೆಯೂ, ಅರ್ಥ ಮಾಡಿಕೊಂಡಿಲ್ಲ ಎಂಬುದು ನನಗೆ ತಿಳಿದಿತ್ತು. |
|
ಒಮ್ಮೆ ನನ್ನ ತಂದೆ ಹೇಳಿದ್ದರು, “ಹುಚ್ಚಾಸ್ಪತ್ರೆಗೆ ದಾಖಲು ಮಾಡುವಷ್ಟು ಹುಚ್ಚ ನೀನಲ್ಲ, ವಿರಕ್ತರ ನಿವಾಸಕ್ಕೆ ದಾಖಲು ಮಾಡಬಹುದಾದ ಸನ್ಯಾಸಿಯೂ ನೀನಲ್ಲ. ನೀನೆಂಬುದು ನನಗೆ ತಿಳಿಯುತ್ತಿಲ್ಲ.” |
|
ನಾನು ಉತ್ತರಿಸಿದ್ದೆ, “ಅಪ್ಪಾ, ಈ ಸ್ಥಿತಿ ಹೇಗಿರುತ್ತದೆ ಎಂಬುದನ್ನು ನಾನು ನಿಮಗೆ ತಿಳಿಸಬಲ್ಲೆ. ಬಾತುಕೋಳಿಯ ಮೊಟ್ಟೆಯೊಂದನ್ನು ಕಾವು ಕೊಟ್ಟು ಮರಿ ಮಾಡಲೋಸುಗ ಒಮ್ಮೆ ಹೇಂಟೆಯ ಅಡಿಯಲ್ಲಿ ಇಡಲಾಯಿತು. ಮೊಟ್ಟೆಯೊಡೆದು ಬಾತುಕೋಳಿಯ ಮರಿ ಹೊರ ಬಂದಾಗ ಅದು ತಾಯಿ ಹೇಂಟೆಯ ಜೊತೆಯಲ್ಲಿ ಕೊಳವೊಂದರ ವರೆಗೆ ನಡೆಯಿತು. ಕೊಳದ ನೀರಿನಲ್ಲಿ ಬಾತುಕೋಳಿಯ ಮರಿ ಬಲು ಖುಷಿಯಿಂದ ಒಂದು ಮುಳುಗು ಹಾಕಿತು. ತಾಯಿ ಹೇಂಟೆಯಾದರೋ ದಡದಲ್ಲಿಯೇ ನಿಂತುಕೊಂಡು ಮರಿಯನ್ನು ಕರೆಯುತ್ತಿತ್ತು. ಅಪ್ಪಾ, ಈಗ ನಾನು ಸಾಗರದಲ್ಲಿ ಮುಳುಗು ಹಾಕಿ ಅದೇ ನನ್ನ ಮನೆ ಎಂಬುದನ್ನು ಕಂಡುಕೊಂಡಿದ್ದೇನೆ. ನೀವು ದಡದಲ್ಲಿಯೇ ನಿಂತುಕೊಂಡಿರಲು ಇಚ್ಛಿಸುವಿರಾದೆ ಅದು ನನ್ನ ತಪ್ಪೇ? ನನ್ನ ಮೇಲೆ ನೀವು ತಪ್ಪು ಹೊರಿಸುವಂತಿಲ್ಲ.” |
|
***** |
|
೫. ಎಲ್ಲವನ್ನೂ ಕಳೆದುಕೊಳ್ಳುವುದು |
|
ನಗರಕ್ಕೆ ಹೋಗುವ ದಾರಿಯಲ್ಲಿ ಹುಬ್ಬು ಗಂಟಿಕ್ಕಿಕೊಂಡು ನಡೆಯುತ್ತಿದ್ದವನೊಬ್ಬನನ್ನು ಒಬ್ಬ ಮೌಲಾ ನೋಡಿದ. “ನಿನ್ನ ಸಮಸ್ಯೆ ಏನು?” ಕೇಳಿದ ಮುಲ್ಲಾ. ಆ ಮನುಷ್ಯ ಒಂದು ಹರಕಲು ಚೀಲ ಎತ್ತಿ ತೋರಿಸುತ್ತಾ ಹೇಳಿದ, “ಈ ವಿಶಾಲ ಜಗತ್ತಿನಲ್ಲಿ ನನ್ನದು ಅಂದುಕೊಳ್ಳಬಹುದಾದದ್ದೆಲ್ಲವನನ್ನು ಹಾಕಿದರೂ ಈ ದರಿದ್ರ ಚೀಲ ತುಂಬುವುದಿಲ್ಲ.” ಮೌಲಾ “ಛೆ, ಅಯ್ಯೋ ಪಾಪ,” ಅಂದವನೇ ಚೀಲವನ್ನು ಆ ಮನುಷ್ಯನ ಕೈನಿಂದ ಕಸಿದುಕೊಂಡು ನಗರದತ್ತ ರಸ್ತೆಯಲ್ಲಿ ಓಡಿ ಹೋದ. ತನ್ನಲ್ಲಿದ್ದ ಎಲ್ಲವನ್ನೂ ಕಳೆದುಕೊಂಡ ಆ ಮನುಷ್ಯ ಹಿಂದೆಂದಿಗಿಂತಲೂ ಸಂಕಟಪಡುತ್ತಾ ಬಿಕ್ಕಿಬಿಕ್ಕಿ ಅಳುತ್ತಾ ಪ್ರಯಾಣ ಮುಂದುವರಿಸಿದ. ಚೀಲದೊಂದಿಗೆ ಓಡಿ ಹೋಗಿದ್ದ ಮೌಲಾ ರಸ್ತೆಯಲ್ಲಿದ್ದ ಒಂದು ತಿರುವು ಆದ ನಂತರ ಚೀಲವನ್ನು ರಸ್ತೆಯ ಮಧ್ಯದಲ್ಲಿ ನಡೆದುಕೊಂಡು ಬರುತ್ತಿದ್ದ ಅದರ ಮಾಲಿಕನಿಗೆ ಕಾಣುವಂತೆ ಇಟ್ಟು ಪೊದೆಯೊಂದರ ಹಿಂದೆ ಅಡಗಿ ಕುಳಿತ. ರಸ್ತೆಯ ಮಧ್ಯದಲ್ಲಿ ಇದ್ದ ತನ್ನ ಚೀಲವನ್ನು ಕಂಡೊಡನೆ ಆ ಮನುಷ್ಯ ಸಂತೋಷದಿಂದ ನಗುತ್ತಾ ಬೊಬ್ಬೆ ಹೊಡೆದ, “ನನ್ನ ಚೀಲ. ನಿನ್ನನ್ನು ನಾನು ಕಳೆದುಕೊಂಡೆ ಎಂಬುದಾಗಿ ಆಲೋಚಿಸಿದ್ದೆ.” ಪೊದೆಯ ಹಿಂದೆ ಅಡಗಿ ಕುಳಿತಿದ್ದ ಮೌಲಾ ಲೊಚಗುಟ್ಟುತ್ತಾ ತನಗೆ ತಾನೇ ಹೇಳಿಕೊಂಡ, “ಒಬ್ಬನನ್ನು ಸಂತೋಷಪಡಿಸುವ ಒಂದು ವಿಧಾನ ಇದು!” |
|
***** |